ಕ್ಲೋಜೆವಿಟ್ಸ್, ಕಾರ್ಲ್‍ಫಾನ್	
1780-1831. ಪ್ರಷ್ಯದೇಶದ ಜನರಲ್, ಜಗದ್ವಿಖ್ಯಾತ ಸೇನಾಚರಿತ್ರಕಾರ ಮತ್ತು ಆಧುನಿಕ ಭೂಯುದ್ಧ ತತ್ತ್ವದಲ್ಲಿ ಅಗ್ರೇಸರ. 12ನೆಯ ವಯಸ್ಸಿನಲ್ಲಿ ಸೇನೆಗೆ ಸೇರಿ ಒಂದೇ ವರ್ಷದಲ್ಲಿ ಕಮಿಷನ್ ಪಡೆದ. ಸ್ವಯಂಶಿಕ್ಷಣದಿಂದ ವಿದ್ವಾಂಸನಾಗಿ 21ನೆಯ ವಯಸ್ಸಿನಲ್ಲಿ ಬರ್ಲಿನಿನ ಯುದ್ಧ ಅಕಾಡೆಮಿಯಲ್ಲಿ ಸೈನಿಕ ವಿಜ್ಞಾನದಲ್ಲಿ ಪ್ರವೀಣನಾದ. ತತ್ತ್ವಶಾಸ್ತ್ರ, ಸಾಹಿತ್ಯಗಳನ್ನೂ ಅಧ್ಯಯನ ಮಾಡಿದ. ಸ್ವಯಂಕಲ್ಪಿತ ಮೂಲಭೂತ ಸೈನಿಕಯುಕ್ತಿ, ವ್ಯೂಹನಿರ್ಮಾಣ ತಂತ್ರಗಳ ಭಾವನೆಯನ್ನು ಪ್ರವರ್ಧಿಸಿದ. ಗೆನಾ ಯುದ್ಧದಲ್ಲಿ ಸೆರೆ ಹಿಡಿಯಲ್ಪಟ್ಟು ಎರಡು ವರ್ಷಗಳ ಬಳಿಕ ಬಿಡುಗಡೆ ಪಡೆದ ಪ್ರಷ್ಯದ ಸೇನೆಗಳನ್ನು ಸುಧಾರಿಸಿ ಬಹಳ ಪ್ರಗತಿಗೆ ತಂದ. ನೆಪೋಲಿಯನ್ ರಷ್ಯವನ್ನು ದಾಳಿಮಾಡಿದಾಗ ಕ್ಲೋಜೆವಿಟ್ಸ್ ಸ್ವದೇಶಾಭಿಮಾನದಿಂದ ತನ್ನ ಕಮಿಷನ್ನಿಗೆ ರಾಜೀನಾಮೆ ಕೊಟ್ಟು ಫ್ರೆಂಚರೊಡನೆ ಹೋರಾಡಲು ರಷ್ಯನ್ ಸೇನೆಯನ್ನು ಸೇರಿ ಧೈರ್ಯ, ಸಾಹಸಗಳಿಂದ ಯಶಸ್ವಿಯಾದ. ಪ್ರಷ್ಯಕ್ಕೆ ಹಿಂತಿರುಗಿ ವಾಟರ್‍ಲೂ ಯುದ್ಧದಲ್ಲಿ ಸೇನಾಧಿಕಾರಿಯಾಗಿ 1818ರಲ್ಲಿ ಜನರಲ್ ಪದವಿಗೇರಿದ. ಪ್ರಷ್ಯದ ಸೇನಾ ಅಕಾಡೆಮಿಯ ಡೈರೆಕ್ಟರಾಗಿ 12 ವರ್ಷಗಳ ಕಾಲ ಅಮೋಘ ಸೇನಾಚರಿತ್ರೆಗಳನ್ನು ಬರೆದ. ಫ್ರೆಡರಿಕ್ ಮಹಾಶಯ ಮತ್ತು ನೆಪೋಲಿಯನ್ನರ ಸಾಹಸಿಕ ದಿಗ್ವಿಜಯಗಳನ್ನು ನಿರೂಪಿಸಿದ. ಹಿಂದಿನ ಕಾಲಗಳ ಸೈನಿಕ ನಿಬಂಧನೆಗಳನ್ನು ಖಂಡಿಸಿ ಯುದ್ಧಕಲೆಯಲ್ಲಿ ನವೀನ ಮೂಲತತ್ವ ಸಿದ್ಧಾಂತಗಳನ್ನು ಸ್ಥಾಪಿಸಿ ಅನುಪಮ ಇತಿಹಾಸಕಾರನೆನಿಸಿಕೊಂಡ.

	ಕ್ಲೋಜೆವಿಟ್ಸನ ಅಮೂಲ್ಯ ಗ್ರಂಥಗಳು ಮಹಾಪ್ರಭಾವಶಾಲಿಗಳು. ಅವು ಅವನ ಪ್ರಚಂಡ ಪ್ರತಿಭಾಶಕ್ತಿಯನ್ನು ಪ್ರದರ್ಶಿಸುತ್ತವೆ. ರಾಜಕೀಯ ಮತ್ತು ಸೈನಿಕ ನಾಯಕತ್ವಗಳ ಪರಸ್ಪರ ಸಂಬಂಧವನ್ನು ಮೊತ್ತಮೊದಲು ತೋರಿಸಿದ್ದು ಈ ಗ್ರಂಥಗಳು. ಅವನ ವಿಶ್ವವಿಖ್ಯಾತ ಆನ್ ವಾರ್ ಎಂಬ ಗ್ರಂಥ ಏಳೆಂಟು ಭಾಷೆಗಳಿಗೆ ಅನುವಾದವಾಗಿದೆ. ಅದರ ಬೋಧೆಗಳನ್ನು ನಾನಾ ದೇಶಗಳ ಪ್ರಮುಖ ಜನರಲ್ಲುಗಳು ನಾನಾ ಯುದ್ಧಗಳಲ್ಲಿ ಅನುಸರಿಸಿದರು. ಅದರಲ್ಲಿ ರೂಪಿಸಿರುವ ಅಪೂರ್ವ ಕಲ್ಪನಾಶಕ್ತಿ ಅದಕ್ಕೆ ಜಗತ್ತಿನ ಇತಿಹಾಸ ಪ್ರಸಿದ್ಧ ಗ್ರಂಥಗಳ ಅಂತಸ್ತಿನಲ್ಲಿ ಸ್ಥಾನ ದೊರಕಿಸಿಕೊಟ್ಟಿದೆ. 				 (ಎಂ.ಜಿ.ಕೆ.ಎಂ.)